ನೋಡು ಬಾ ಈ ಊರ > ಬೆಂಗಳೂರಿನಿಂದ ಮಡಿಕೇರಿಗೆ
 
ಬೆಂಗಳೂರಿನಿಂದ ಮಡಿಕೇರಿಗೆ. . .
ಬೆಂಗಳೂರಿನ ಯಾಂತ್ರಿಕ ಬದುಕಿಗೆ ಅಲ್ಪ ವಿರಾಮ ಹಾಕಿ, ಮಡಿಕೇರಿ ಸುತ್ತ ಮುತ್ತಲಿನ ನಿಸರ್ಗ ರಮಣೀಯತೆಯ ಸವಿಯನ್ನು ಉಣ್ಣಲು ಹೊರಟ ಸಾಫ್ಟಿಗಳ ಅನುಭವದ ಸವಿ ನೆನಪು,ಸುರಳಿಯಾಗಿ ಹೊರ ಹೊಮ್ಮಿದೆ.ಪ್ರಕೃತಿಯ ಮಡಿಲ ಸೌಂದರ್ಯ ವರ್ಣನೆ ನಿಮ್ಮನ್ನು ಬೇರೊಂದು ಲೋಕಕ್ಕೆ ಕರೆದೊಯ್ಯದೆ ಬಿಡದು...
ಆ ದಿನ ಸಮಯ ರಾತ್ರಿ ೧೦.೩೦ ಘಂಟೆ, ನನ್ನ ಸಹೋದ್ಯೋಗಿಗಳು ನನ್ನ ಬರುವಿಕೆಯನ್ನು ಕಾಯುತ್ತ ನಿಂತಿದ್ದರು. ನಾನು ಬೈಕ್ ಅನ್ನು ನಿಲ್ಲಿಸುತ್ತಿದ್ದಂತೆ, ನನ್ನ ಮೊಬೈಲ್ಗೆ ಸ್ನೇಹಿತ ಪ್ರದೀಪ್‌ನಿಂದ ಕಾಲ್ ಬಂತು. ಆಗ ತಡವಾಗಿ ಬಂದುದ್ದಕ್ಕೆ ಕ್ಷಮೆಯಾಚಿಸಿ ನಮಗಾಗಿ ಕಾದು ನಿಂತಿದ್ದ ಶಬರಿ, ಬಸ್ಸಿನ ಮುಂದೆ ನಿಂತು ಒಂದು ಫೋಟೊ ತೆಗಿಸಿಕೊಂಡು ಬಸ್ಸನ್ನೇರಿದೆವು. ನಮ್ಮ ಪಯಣ ಮಡಿಕೇರಿಯ ಕಡೆ ಸಾಗಿತ್ತು.
 
ಕೆಲಸ ಮುಗಿಸಿಕೊಂಡು ಮನೆಗೆ ತೆರಳಿ, ನಮ್ಮ ಬಟ್ಟೆ ಬರೆಗಳನ್ನು ಚೀಲೆಯೊಳಗೆ ತೂರಿಸಿಕೊಂಡು, ಹಾಗೆಯೆ ಹಸಿವಿನ ಪರಿವಿಲ್ಲದೆಯ ಬಂದಿದ್ದೆವು. ಬಸ್ಸು ಹೊರಡುತ್ತಿದ್ದಂತೆ ಎಲ್ಲರಲ್ಲೂ ಒಂದು ಬಗೆಯ ಉತ್ಸಾಹ, ಚೈತನ್ಯ. ಹಾಗೆ ಹರಟೆ ಹೊಡೆಯುತ್ತ ಒಬ್ಬರನ್ನೊಬ್ಬರು ಗೇಲಿ ಮಾಡುತ್ತ, ಕಿರುಚಾಡುತ್ತ ಸಾಗುತ್ತಿದ್ದೆವು. ಆ ವೇಳೆಗೆ ಎಲ್ಲಿರಿಗು ಹಸಿವು ಕಾಡತೊಡಗಿತ್ತು, ಗಡಿಯಾರ ನೋಡಿದಾಗ ಸಮಯ ಮುಂಜಾನೆ ೧.೩೦ ಯಾಗಿತ್ತು. ಆ ಹಾದಿಯಲ್ಲಿ ಒಂದು ದಾಬಾದ ಮುಂದೆ ಬಸ್ಸನ್ನು ನಿಲ್ಲಿಸಿ, ಆ ದಾಬಾದಲ್ಲಿ ಆ ರಾತ್ರಿಯ ಭೋಜನ ಮುಗಿಸಿದೆವು. ಆದರೆ ನಮ್ಮ ಒಬ್ಬ ಸ್ನೇಹಿತ ರಾಕೇಶನಿಗೆ ರೋಟಿಯ ಜೊತೆ ಹಂಚಿಕೊಳ್ಳಲು ಕೊಟ್ಟ ಆಲೂಗಡ್ಡೆ ಪಲ್ಯೆ ಸರಿಯಾಗಿ ಬೇಯಿಸಿಲ್ಲವೆಂಬ ವಿಷಾದವಿತ್ತು. ಮತ್ತೆ ಬಸ್ಸನ್ನೇರಿದೆವು, ಪಯಣ ಸಾಗುತ್ತಿದ್ದಂತೆ ನಿದ್ರಾದೇವಿಗೆ ಎಲ್ಲರು ಶರಣಾದರು. ಆದರೆ ನಾನು ಪ್ರದೀಪ ಮಾತ್ರ ನಮ್ಮ ಹಳೆಯ ನೆನಪುಗಳನ್ನು ಕೆಣಕುತ್ತ, ಸ್ನೇಹ, ಪ್ರೀತಿ, ವಿಶ್ವಾಸ, ನಂಬಿಕೆಯ ಅನುಭವವನ್ನು ಹಂಚಿಕೊಳ್ಳುತ್ತ, ಆಧ್ಯಾತ್ಮಿಕವಾಗಿ ಚರ್ಚಿಸುತ್ತಿದ್ದೆವು. ಸ್ವಲ್ಪ ಸಮಯದ ನಂತರ ನಮಗೂ ನಿದ್ರೆ ಆವರಿಸಿತ್ತು. ನಮಗೆ ಎಚ್ಚರವಾದದ್ದು ಬಸ್ಸು ಕುಶಾಲನಗರದ ಕನ್ನಿಕಾ ಇಂಟರ್ ನ್ಯಾಷನಲ್ ಹೋಟೆಲ್ ಎದುರು ನಿಂತಾಗ. ಆ ಸಮಯ ಬೆಳಗಿನ ಜಾವ ೫.೩೦. ಬಸ್ಸನ್ನು ಇಳಿಯುತ್ತಿದ್ದಂತೆ ಆ ನಗರದ ಚಳಿ ನಮ್ಮನ್ನು ತನ್ನ ಬಾಹುವಿನಿಂದ ತಬ್ಬಿ ಸ್ವಾಗತಿಸಿತು.ಆ ಕೊರೆಯುವ ಚಳಿಯ ಸ್ಪರ್ಶ ಮರೆಯಲಾಗದ ಅನುಭವ.
 
ನಾವು ನಮ್ಮ ನಮ್ಮ ಕೋಣೆಗಳಿಗೆ ತೆರಳಿ ಮತ್ತೆ ನಿದ್ರಾ ದೇವಿಯ ಮಡಿಲನ್ನು ಸೇರಿದೆವು. ಕಣ್ಣು ಮುಚ್ಚಿ ಕೆಲವೇ ಸಮಯವಾಗಿತ್ತು ಆಗ ನಮ್ಮ ಗೆಳೆಯ ಚಂದ್ರು, ಎಲ್ಲರ ಕೋಣೆಯ ಬಾಗಿಲನ್ನು ತಟ್ಟುತ್ತ ಎಚ್ಚರಿಸತೊಡಗಿದರು. ಆಗ ಚಂದ್ರುವನ್ನು ಮನಸ್ಸಿನಲ್ಲಿ ತೆಗಳುತ್ತ ನಾವೆಲ್ಲರು ಸೋಲಾರ್ ವಾಟರ್ ಹೀಟರಿನ ಜಳಕದಿಂದ ಪುಳಕಗೊಂಡು, ಉತ್ಸಾಹದಿಂದ ಮತ್ತೆ ಬಸ್ಸನ್ನೇರಿದೆವು, ಆಗ ನಮ್ಮೋಡನೆ ಅಲ್ಲಿನ ಜಾಗವನ್ನು ಚೆನ್ನಾಗಿ ಅರಿತ್ತಿದ್ದ ಗೈಡ್ ನಮ್ಮ ಜೊತೆ ಸೇರಿಕೊಂಡನು
 
ಹೋಟೆಲ್‌ನಿಂದ ಹೊರಟು ದಾರಿಯಲ್ಲಿ ತಿಂಡಿ ಮಾಡಿ, ನಮ್ಮ ಬಸ್ಸು ಕಾವೇರಿ ನಿಸರ್ಗಧಾಮದ ಕಡೆ ಹೊರಟ್ಟಿತ್ತು. ನನಗೆ ಮತ್ತು ನನ್ನ ಗೆಳೆಯ ಪ್ರದೀಪನಿಗೆ ಇದು ಹೊಸತನದ ಅನುಭವ. ಆ ನಿಸರ್ಗಧಾಮವನ್ನು ತಲುಪಿದ್ದೆ ತಡ, ಪ್ರಕೃತಿ ಸೌಂದರ್ಯವನ್ನು ಕಂಡು ನಾವು ನಮ್ಮನ್ನೆ ಮರೆತೆವು. ಅಲ್ಲಿನ ಅರಣ್ಯ ಮಾಹಿತಿ ಕೇಂದ್ರಕ್ಕೆ ಭೇಟಿ ನೀಡಿದೆವು, ಗೋಡೆಗಳ ಮೇಲೆ ಅಲ್ಲಿನ ಪರಿಸರದ ಚಿತ್ರಣವನ್ನು ಬಿಂಬಿಸುತ್ತಿತ್ತು. ಅಲ್ಲಿಂದ ಮುಂದೆ ಬ್ಯಾಂಬೂ ಗಿಡಗಳ ಮಧ್ಯೆ ನಡೆಯುತ್ತ, ಜಿಂಕೆ ಹಾಗು ಆನೆಯನ್ನು ಇರಿಸಲಾಗಿದ್ದ ಸ್ಥಳಕ್ಕೆ ತೆರಳಿದೆವು. ಅಲ್ಲಿ ಜಿಂಕೆಗಳಿಗೆ ಸೌತೆಕಾಯಿ ತಿನ್ನಿಸಿದ್ದು ಒಂದು ಅನುಭವ. ನಂತರ ಆನೆ ಮೇಲೆ ಕುಳಿತು, ಆನೆಯ ಮೇಲೆ ಅಂಬಾರಿ ಕಂಡೆ, ಅಂಬಾರಿಯೊಳಗೆ ನನ್ನನ್ನೆ ಕಂಡೆ ಎಂದು ಹಾಡುತ್ತ ಆ ವಿಹಾರದ ಸವಿಯನ್ನು ಕ್ಯಾಮರದಲ್ಲಿ ಸೆರೆಹಿಡಿದೆವು. ಆನಂತರ ಅಲ್ಲಿಯೆ ಪಕ್ಕದಲ್ಲಿದ್ದ ಕಾಲುವೆಯ ಬಳಿ ತೆರಳಿದೆವು, ಅಲ್ಲಿ ಮೊಣಕಾಲೆತ್ತರದ ನೀರಿನಲ್ಲಿ ಆಟವಾಡುತ್ತ ಸ್ವಲ್ಪ ಸಮಯವನ್ನು ಕಳೆದೆವು. ನಿಸರ್ಗಧಾಮದ ಅನುಭವ ಆ ಪ್ರಕೃತಿ ಮಾತೆಯ ಜೊತೆ ಕಳೆದ ಕೆಲವು ಕ್ಷಣಗಳಾಗಿದ್ದವು.
 
ನಿಸರ್ಗಧಾಮದ ಸವಿಯನ್ನು ನೆನಪಿಸಿಕೊಳ್ಳುತ್ತ, ನಮ್ಮ ಬಸ್ಸು ಕಾವೇರಿ ಬೋಟಿಂಗ್ ಇದ್ದ ಬೋರ್ಡ್ ಮುಂದೆ ಬಂದು ನಿಂತಿತು. ಆ ಬೋರ್ಡಿನ ಹಿಂದೆ ಕಾವೇರಿಯು ಹಾಡುತ್ತ ಹರಿಯುತ್ತಿದ್ದ ಸೌಂದರ್ಯ ಮನಮೋಹಕ. ಆ ಸೌಂದರ್ಯವನ್ನು ಕಂಡಾಕ್ಷಣ ನನಗೆ ಅನಿಸಿದ್ದು ಆ ಕಾವೇರಿ ಮಡಿಲಲ್ಲಿ ಮುಳುಗಿ ಮತ್ತೆ ಏಳಬೇಕೆಂಬ ಬಯಕೆ. ಆದರೆ ಈಜು ಬರದಿದ್ದ ಕಾರಣಕ್ಕೆ ತೆಪ್ಪಗಾಗಿ, ಅಲ್ಲೆ ದಡದಲ್ಲಿ ಆಡುತ್ತಿದ್ದ ಮೂರು ವರ್ಷದ ಗೌತಮಿಯ ಧೈರ್ಯವನ್ನು ಕಂಡು ಅವಳೊಡನೆ ಆಡ ತೊಡಗಿದೆನು. ನಂತರ ಅಲ್ಲಿಗೆ ಬಂದ ಮೋಟರ್ ಬೋಟ್‌ನ್ನು ಏರಿ ಕುಳಿತೆವು. ಆ ಬೋಟಿನ ಮೋಟರಿಸ್ಟ್ (ಅಂಬಿಗ) ನಮಗೆ ಆ ನದಿಯ ಸುತ್ತ ಮುತ್ತಲಿನ ಪರಿಸರವನ್ನು ತೊರಿಸುತ್ತ, ಹಾಗೆಯೆ ಆ ದೋಣಿಯನ್ನು ಬಳಕಿಸುತ್ತ ಬಾಗಿಸುತ್ತ, ನಮ್ಮ ಆ ಭಯದಲ್ಲೆ ದೋಣಿ ವಿಹಾರದ ಸವಿಯನ್ನು ಉಣಿಸಿದರು. ಆಹಾ! ಓಹೋ! ಆ ನದಿಯ ತಂಪಾದ ಗಾಳಿ, ಆ ನೀರಿನ ನಿಶಬ್ದತೆಯ ಶಬ್ದ, ಸುತ್ತ ಮುತ್ತಲಿನ ಗಿಡಮರಗಳಿಂದ ಬರುತ್ತಿದ್ದ ಗಾಯನದಲ್ಲಿ ನನ್ನನ್ನು ನಾನೆ ಮರೆತೆನು. ಕನ್ನಡ ನಾಡಿನ ಜೀವ ನದಿ ಕಾವೇರಿ ಎಂದು ಹಾಡುತ್ತ ದಡ ಸೇರಿದೆವು.
 
ಮತ್ತೆ ಬಸ್ಸು ಹತ್ತಿ ಗಡಿಯಾರ ನೋಡಿದಾಗ ಸಮಯ ಮಧ್ಯಾಹ್ನ ೨.೦೦ ಗಂಟೆಯಾಗಿತ್ತು. ಅಲ್ಲಿಂದ ಮಡಿಕೇರಿ ತಲುಪಿ ಭೋಜನ ಮುಗಿಸಿಕೊಂಡು ಅಬ್ಬಿ ಫಾಲ್ಸ್ ಕಡೆ ನಮ್ಮ ಬಸ್ಸು ಹೊರಟಿತು. ಆ ಮಡಿಕೇರಿಯ ವಾತಾವರಣ, ಆ ಪರಿಸರದ ಮುಗ್ದತೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತ ಅಬ್ಬಿ ಜಲಪಾತ ತಲುಪಿದೆವು. ಆ ಜಲಪಾತವನ್ನು ಕಂಡೊಡನೆ, ನಮ್ಮ ಅಂಗಿಯನ್ನು ಬಿಚ್ಚಿಟ್ಟು, ಆ ಜಲಪಾತದ ಕೆಳಗೆ ನಿಂತು ಅದರ ಸವಿಯನ್ನು ಅನುಭವಿಸಿದೆವು.
 
ಅಲ್ಲಿಂದ ಹೊರಟು, ದಾರಿಯಲ್ಲಿ ನಮ್ಮ ಪ್ಯಾಂಟನ್ನು ಒಣಗಿಸಿಕೊಳ್ಳುತ್ತ, ರಾಜಾ ಸೀಟ್ ಬಳಿ ತೆರಳಿದೆವು. ಆಹಾ! ಎತ್ತರದ ಅಂಚಿನಲ್ಲಿ ನಿಂತು ನೋಡಿದರೆ, ದೂರದ ಹತ್ತು ಊರುಗಳು ಕಾಣುತ್ತಿದ್ದವು. ಅಲ್ಲಿನ ಪ್ರಕೃತಿ ಸೌಂದರ್ಯ ನೋಡುತ್ತಿದ್ದಂತೆ, ಸೂರ್ಯ ಮುಳುಗ ತೊಡಗಿದ. ಆ ಎತ್ತರದಲ್ಲಿ ನಿಂತು ನಮಗೆ ಕಾಣಿಸಿದ್ದು ಸೂರ್ಯ ಆ ಮಲೆಗಳ ಸಾಲಿನಲ್ಲಿ ಪ್ರಕೃತಿಯ ಮಡಿಲಿಗೆ ಜಾರಿಕೊಳ್ಳುತ್ತಿದ್ದ ಸುಂದರವಾದ ದೃಶ್ಯ. ಆಗ ಸಮಯ ಸಂಜೆ ೬.೪೫ ಯಾಗಿತ್ತು.
 
ರಾಜಾ ಸೀಟ್‌ನಿಂದ ಹೊರಟು, ಸೀದಾ ನಾವು ಮತ್ತೆ ಕನ್ನಿಕಾ ಹೋಟೆಲ್ ತಲುಪಿದೆವು, ಸ್ವಲ್ಪ ಸಮಯದ ವಿಶ್ರಾಂತಿಯ ನಂತರ, ಆ ಹೋಟೆಲಿನ ಆವರಣಕ್ಕೆ ಬಂದಾಗ ನಮ್ಮ ಖುಷಿಗೆ ಪಾರವೆ ಇರಲಿಲ್ಲ, ಆ ಹೋಟೆಲಿನವರು ಆವರಣದಲ್ಲಿ ನಮಗೆಂದೇ ಕ್ಯಾಂಪ್ ಫೈರ್ ಹಾಕಿಸಿದ್ದರು. ಆ ಸಂಜೆಯ ಚಳಿಯಲ್ಲಿ ಆ ಕ್ಯಾಂಪ್ ಫೈರ್ ಸುತ್ತ ಹಾಡುತ್ತ ಕುಣಿಯುತ್ತ, ಸಮಯವನ್ನು ಕಳೆದೆವು. ಇದರ ಜೊತೆಯಲ್ಲೆ ನಮ್ಮ ರಾತ್ರಿಯ ಭೋಜನವು ಆಯಿತು. ಹೀಗೆ ಆ ದಿನದ ಬಗ್ಗೆ ಚರ್ಚೆ ಮಾಡುತ್ತ ಗಡಿಯಾರ ನೋಡಿದಾಗ ರಾತ್ರಿ ೧೨.೦೦ ಘಂಟೆಯಾಗಿತ್ತು. ಮತ್ತೆ ನಾವೆಲ್ಲರು ನಮ್ಮ ಕೊಠಡಿಗಳಿಗೆ ತೆರಳಿ, ನಮ್ಮ ಬ್ಯಾಗನ್ನು ಅಣಿ ಮಾಡಿಕೊಂಡು ಬಸ್ಸಿನಲ್ಲಿ ಕುಳಿತು, ಬೆಂಗಳೂರಿನ ಹಾದಿ ಹಿಡಿದೆವು. ಆ ಪೂರ್ತಿ ದಿನದ ಆಯಾಸದಿಂದಲೇನೊ ನಮಗೆ ಹಿಂದಿರುವಾಗ ಒಳ್ಳೆ ನಿದ್ರೆ ಹತ್ತಿತು. ಮತ್ತೆ ಎಚ್ಚರ ವಾದದ್ದು, ಈ ಯಾಂತ್ರಿಕ ನಗರದ ಒಂದು ಲಾರಿಯ ಗಡುಸಾದ ಹಾರ್ನ್‌ನಿಂದ. ನಾವು ಬೆಂಗಳೂರು ತಲುಪಿದಾಗ ಬೆಳಗ್ಗೆ ೬.೦೦ ಯಾಗಿತ್ತು. ಕಾಲ ಮುಂದೆ, ನಾವು ಹಿಂದೆ ಎಂದು ಮನಸ್ಸಿನಲ್ಲಿ ಹಾಡುತ್ತ ನಾನು ನನ್ನ ಬೈಕಿನ ಜೊತೆ ಮನೆಯ ಹಾದಿ ಹಿಡಿದೆನು.
 
ಲೇಖಕರು : ಮನುಷಾ, ಟೆಲಿಕಾಂ ಇಂಜಿನೀಯರ್, ಬೆಂಗಳೂರು
Top
 
~~~~~~~~~~~~~~~~~~