| ~~~ ನಮ್ಮ ತಂಡ ~~~ | ||
| ಯೋಜನೆಯ ಕಿರು ಪರಿಚಯ: | ||
| ನಮ್ಮ ತಂಡ ಹಾಗೂ ಉದ್ದೇಶ | ||
| ನಮಗೆ ಅಂದರೆ ನನಗೆ, ವೀರೇಶನಿಗೆ ಹೀಗೆ ಒಮ್ಮೆಕನ್ನಡದ ಕವಿಗಳ ಬಗ್ಗೆ ಅಂತರ್ಜಾಲದಲ್ಲಿ ಹುಡುಕುತ್ತಿರುವಾಗ ನಮಗೆ ಸಿಕ್ಕ ಮಾಹಿತಿ ಹಾಗೂ ಅಂತರ್ಜಾಲ ವಿಳಾಸಗಳ ಪಟ್ಟಿ ನೋಡಿ ತುಂಬಾ ಬೇಸರವಾಯಿತು. ಕಾರಣ ಇಷ್ಟೆ ಯಾವ ಜಾಲದಲ್ಲೂ ಪೂರ್ಣವಿವರಗಳು, ಚಿತ್ರಗಳು ಪೂರಕವಾಗಿ ದೊರೆಯಲಿಲ್ಲ, ಒಂದೆರಡು ಜಾಲಗಳು ಅದಕ್ಕೆ ಅಪವಾದ. ಆದರೂ ಅವುಗಳಲ್ಲಿ ಎಲ್ಲಾ ಕವಿಗಳನ್ನು ಅಂದರೆ ಆದಿಕವಿ ಪಂಪನಿಂದ ಆಧುನಿಕ ಕವಿಯವರೆಗೆ ವಿವರ ದೊರೆಯುವುದು ತುಂಬಾ ಕಷ್ಟ. | ||
| ಅಂದೆ ನಾವು ನಮ್ಮ ಪ್ರಸ್ತುತ ಯೋಜನೆಯನ್ನು ಸಿದ್ಧಪಡಿಸಲು ಪ್ರಾರಂಭಿಸಿದೆವು. ನಮ್ಮ ಜೊತೆಗೆ ನಮ್ಮ ಮರಾಠಿ ಮಿತ್ರ ಮಂಜುನಾಥ ರಾವ್ ಕೂಡ ಸೇರಿಕೊಂಡ. ಹೀಗೆ ಅಂದಿನಿಂದ ಮಾಹಿತಿ ಸಂಗ್ರಹಣೆ ಕಾರ್ಯದಲ್ಲಿ ನಿರತರಾದೆವು. ನಮಗೆ ಬಿಡುವ ಸಿಗುತ್ತಿದ್ದದ್ದು ಶನಿವಾರ, ಭಾನುವಾರ ಮಾತ್ರ. ಮೊದಲು ಮಾಹಿತಿ ಸಂಗ್ರಹಣೆಗೆ ಬೇಕಾದ ಕವಿಗಳ ಪಟ್ಟಿಯನ್ನು ತಯಾರಿಸಿದೆವು. ಅದರಂತೆ ಅನೇಕ ಗ್ರಂಥಾಲಯಗಳಲ್ಲಿ, ಕನ್ನಡ ಸಾಹಿತ್ಯ ಪರಿಷತ್ತಿನವರ ಸಹಕಾರದಿಂದ ಮಾಹಿತಿ ಸಂಗ್ರಹಿಸುತ್ತ ಹೋದೆವು. | ||
| ಹೀಗೆ ಸಂಗ್ರಹಿಸುತ್ತಾ ಹೋದಂತೆ ಪಟ್ಟಿ ಬೆಳೆಯುತ್ತಾ, ಬೆಳೆಯುತ್ತಾ ಈಗ ೩೯೫ ಕ್ಕೆ ನಿಂತಿದೆ, ಅದೂ ನಿಲ್ಲುವುದು ಇಲ್ಲಾ ಬಿಡಿ. ಆದರೆ ಅಷ್ಟೂ ಜನ ಸಾಹಿತಿಗಳ ಮಾಹಿತಿ ಸಂಗ್ರಹಣೆಗೆ ಕಾಲಾವಕಾಶ ಹೆಚ್ಚಾಗಿ ಬೇಕಾಗಿರುವುದರಿಂದ, ಮೊದಲ ಆವೃತ್ತಿಯಲ್ಲಿಕೆಲವು ಸಾಹಿತಿಗಳ ಪರಿಚಯವನ್ನು ಹೊರತರುತ್ತಿದ್ದೇವೆ. ಇಷ್ಟೆಲ್ಲಾ ನಾವು ಬಾಹ್ಯ ಪ್ರಪಂಚದಲ್ಲಿ ಮಾಡುತ್ತಿರುವ ಕಾರ್ಯವಾದರೆ ನಮ್ಮ ತಂಡದ ಕೊನೆಯ ಮುಖ್ಯ ಸದಸ್ಯನಾದ ಕೃಷ್ಣಪ್ರಸಾದನ ಸಹಾಯ ಇನ್ನೊಂದು ರೀತಿಯದು. ಅವನದು ನಮ್ಮ ಜೊತೆ ಸದ್ಯಕ್ಕೆ ಅಂತರ್ಜಾಲದ ಮೂಲಕ ಸಂಪರ್ಕವಷ್ಟೇ ! ಆಸ್ಟ್ರೇಲಿಯಾದಲ್ಲಿರುವ ಕೃಷ್ಣಪ್ರಸಾದನು ನಮ್ಮ ಯೋಜನೆಯನ್ನು ಪೂರ್ಣವಾಗಿ ಜಗಜಾಹೀರುಗೊಳಿಸಲು ನೆರವಾಗುತ್ತಿದ್ದಾನೆ, ನಮ್ಮ ಯೋಜನೆಗೆ ನೆರವಾಗಬಲ್ಲ ಹಿರಿಯರ, ಮಾರ್ಗದರ್ಶಿಗಳ ಸಂಪರ್ಕವನ್ನು ಸಾಧ್ಯಮಾಡಿದ್ದಾನೆಂದರೆ ತಪ್ಪಾಗಲಾರದು. ಈ ಎಲ್ಲಾ ನಮ್ಮ ಕೆಲಸಕ್ಕೆ ಬೆಂಗಾವಲಾಗಿ ನಿಂತು ಯೋಜನೆಗೆ ರೂಪು ಕೊಟ್ಟವರು ನಮ್ಮ ಹಿರಿಯಣ್ಣನಂತಿರುವ ಶ್ರೀ ಕೆ.ಟಿ. ಸತೀಶ್ ಗೌಡ ರವರು, ನಮ್ಮ ಮಿತ್ರ ಅಮೇರಿಕೆಯಲ್ಲಿ ಕೆಲಸನಿರತನಾಗಿರುವ ಸೋಮಶೇಖರ ಹೊಸಮನಿ ಸಕಾಲದಲ್ಲಿ ತನ್ನ ಗಣಕವನ್ನು ನಮಗೆ ಒದಗಿಸಿ ಕೊಟ್ಟು ಎಲ್ಲಾ ರೀತಿ ಸಹಕಾರ ನೀಡಿದ್ದಾರೆ. | ||
| ಮೊದಲು ಕವಿಗಳ ಮಾಹಿತಿ ಸಂಗ್ರಹಣೆಯ ಆಗರ ಮಾತ್ರ ಆಗಬೇಕಿದ್ದ ನಮ್ಮ ಜಾಲವನ್ನು ವಿವಿಧ ಭಾಗಗಳಾಗಿ ವಿಂಗಡಿಸಲು ಪ್ರಾರಂಭಿಸಿದೆವು. ಅದರ ವಿವರ ಯೋಜನೆಯ ವರದಿಯಲ್ಲಿದೆ. ವಿವಿಧ ವಿಭಾಗಗಳನ್ನು ನೋಡಿದ ಮೇಲೆ ಕವಿಕೂಟವನ್ನು ೨೦ ಭಾಗವಾಗಿ ವಿಂಗಡಿಸುವ ಅಗತ್ಯವಿತ್ತೇ ? ಎಂದು ಓದುಗರು ಪ್ರಶ್ನಿಸಬಹುದು. ಖಂಡಿತಾ ಅಗತ್ಯವಿದೆ ಅದು ನಮ್ಮ ಕನ್ನಡ ಸಾಹಿತ್ಯದ ವೈವಿಧ್ಯತೆಯನ್ನು ಸೂಚಿಸುತ್ತದೆ. ಅದರಲ್ಲಿ ಇನ್ನೂ ಅನೇಕ ಭಾಗಗಳನ್ನು ನಾನಾ ಕಾರಣಗಳಿಂದ ಸೇರಿಸಲಾಗಲಿಲ್ಲ ಹಾಗೂ ಅದರಲ್ಲಿ ಕೆಲ ಸಾಹಿತಿಗಳ ಹೆಸರು ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಬದಲಾಗಿದ್ದರೆ ಅಥವಾ ಕೆಲ ಸಾಹಿತಿಗಳ ಹೆಸರು ಬಿಟ್ಟುಹೋಗಿದ್ದರೆ ಕ್ಷಮೆಯಿರಲಿ. | ||
| ನಾವು ವಿಭಾಗ ಮಾಡುವಾಗ ಅನುಸರಿಸಿದ ಮಾರ್ಗವೆಂದರೆ ಒಬ್ಬ ಸಾಹಿತಿ ನಾನಾ ಕ್ಷೇತ್ರದಲ್ಲಿ ದುಡಿದು ಎಲ್ಲದರಲ್ಲೂ ಯಶಸ್ಸು ಗಳಿಸಿದ್ದರೆ ಅದರಲ್ಲಿ ನಮಗೆ ಸೂಕ್ತವೆನಿಸಿದ ಕ್ಷೇತ್ರವನ್ನು ಆರಿಸಿ ಆ ಭಾಗಕ್ಕೆ ಅವರನ್ನು ಸೇರಿಸಿದ್ದೇವೆ ಇದರ ಬಗ್ಗೆ ಚರ್ಚೆಗೆ ಮುಕ್ತ ಅವಕಾಶವಿದೆ. ಕವಿಗಳನ್ನು ಒಂದೇ ವಿಭಾಗಕ್ಕೆ ಸೀಮಿತಗೊಳಿಸಲು ಹೇಗೆ ಸಾಧ್ಯವಿಲ್ಲವೊ ಹಾಗೆ ಎಲ್ಲಾ ಜನರನ್ನು ಮೆಚ್ಚಿಸುವುದು ಸಾಧ್ಯವಿಲ್ಲವೆಂಬುದನ್ನು ಮನಗಾಣ ಬೇಕು. ನಮ್ಮ ಉದ್ದೇಶ ಈ ಯೋಜನೆಯಿಂದ [ಅಂತರ್ಜಾಲ ತಾಣ] ದಿಂದ ಎಲ್ಲಾ ಸ್ತರದ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ, ಮಾಹಿತಿ ಒದಗಿಸುವುದು ತನ್ಮೂಲಕ ಕನ್ನಡದ ಹಿರಿಯರನ್ನು ನೆನೆದು ಕನ್ನಡಗರಲ್ಲಿ ಸ್ವಾಭಿಮಾನವನ್ನು ಹೆಚ್ಚಿಸುವುದು. | ||
| ಕೊನೆಯದಾಗಿ ಹಾಗೂ ಮುಖ್ಯವಾಗಿ: | ||
| ನಾವು ಸಾಹಿತ್ಯ ಅಭ್ಯಾಸಿಗಳಲ್ಲ. ಸಾಹಿತ್ಯದಲ್ಲಿ ಆಸಕ್ತಿಯುಳ್ಳವರು. ನಮ್ಮದು ಇ-ಮಾಧ್ಯಮದಲ್ಲ್ಲಿ ಹೆಚ್ಚು ಒಡನಾಟ. ಅಕ್ಷರಗಳ ಜತೆ ಆಗಾಗ ಕಾದಾಟ. ಕನ್ನಡ ಕವಿಬಳಗದಲ್ಲಿನ ತಪ್ಪು ಒಪ್ಪುಗಳನ್ನು ತಿದ್ದಿ ತೀಡುವ ಜವಾಬ್ದಾರಿ ಈಗ ನಿಮ್ಮ ಕೈಲಿದೆ.ನಿಮ್ಮೆಲ್ಲ ಟೀಕೆ-ಟಿಪ್ಪಣಿಗಳಿಗೆ ಮುಕ್ತ ಸ್ವಾಗತ.ಇದು ಕನ್ನಡದ ಸಾಹಿತ್ಯ ಅಂಗಳ ಇದನ್ನು ಚೆಂದಗಾಣಿಸುವ ಹೊಣೆ ನಮ್ಮೆಲ್ಲರದ್ದಾಗಿದೆ ಎಂಬ ಆಶಯವನ್ನು ನಾವು ಹೊಂದಿದ್ದೇವೆ.ಇಲ್ಲಿರುವ ಮಾಹಿತಿಗಳಲ್ಲಿ ಎಷ್ಟೋ ತಪ್ಪಿರಬಹುದು ಅಥವಾ ಮಾಹಿತಿ ಲೋಪವಾಗಿರಬಹುದು.ದಯವಿಟ್ಟುತಿಳಿದವರು ಸಹಕರಿಸಿ ಮಾಹಿತಿ ಸಂಗ್ರಹಣೆ ಹಾಗೂ ವಿತರಣೆಯ ಕ್ರಾಂತಿಗೆ ನಾಂದಿ ಹಾಡಿ. ಜ್ಞಾನವನ್ನು ಹಂಚುವುದೇ ನಮ್ಮ ಕಾಯಕ. . ಬನ್ನಿ ನಮ್ಮೊಡನೆ ಕೈ ಜೋಡಿಸಿ. | ||
| -ಮಹೇಶ್ ಮಲ್ನಾಡ್, ಕನ್ನಡ ಕವಿ ಬಳಗದ ಸೇವಕ | ||
| ~~~~~~~~~~~~~~~~~~ | ||